Seminar

ಅಂತರಾಷ್ಟ್ರಿಯ ವಿಚಾರ ಸಂಕಿರಣ - ವಚನ ಚಿಂತನ ವಿಶ್ವ ದರ್ಶನ
Date: 12 January 2024

೧೨ನೇ ಶತಮಾನದ ಶರಣರ ವಚನಗಳು ನಿರ್ಭಿಡೆಯ ಸೂಳ್ನುಡಿಗಳು. ಕನ್ನಡ ನೆಲದ ಸತ್ವವನ್ನು ಸಾರುವಂಥ ವಚನಗಳಲ್ಲಿ ಲೋಕಾನುಭವವಿದೆ. ಶರಣರು ಮಾಡಿದ ಕ್ರಾಂತಿಯೂ ಕನ್ನಡದ ಕ್ರಾಂತಿಯೇ ಆಗಿದೆ ಎಂದು ಬೆಂಗಳೂರಿನ ಬಸವ ಸಮಿತಿಯ ಅಧ್ಯಕ್ಷರಾದ ಶ್ರೀ ಅರವಿಂದ ಜತ್ತಿ ಅವರು ಅಭಿಪ್ರಾಯಪಟ್ಟರು.

ಬಸವಾದಿ ಶರಣರ ತತ್ವದರ್ಶನವು ವೈಶ್ವಿಕವಾದುದು. ನಮ್ಮನ್ನು ಮನುಷ್ಯ ಮಾತ್ರವಲ್ಲದೆ ಮನುಷ್ಯ ಸ್ಥಿತಿ-ಗತಿಯನ್ನು ಮೀರಿದ ಪಾರಮಾರ್ಥಿಕವಾದ ಚಿಂತನೆಯ ಮೂಲಕ ನಮ್ಮನ್ನು ನಾವು ಅರಿಯಬೇಕಾದ ಬಗೆಯನ್ನು ಪ್ರೇರೇಪಿಸುವಂಥದ್ದು. ಜಗತ್ತಿನ ಯಾವ ಮೂಲೆಯಲ್ಲಿ ನಿಂತು ವಚನಗಳನ್ನು ಹಾಡಿದರೂ ಸರ್ವರನ್ನೂ ರೋಮಾಂಚನಗೊಳಿಸಬಲ್ಲAಥವು. ಇದಕ್ಕೆ ಕಾರಣ ವಚನಗಳಲ್ಲಿನ ತಾತ್ವಿಕ ಹಾಗೂ ಮಾಧುರ್ಯದ ಸತ್ವ ಕಾರಣವಾಗಿದೆ. ಇಂದು ನಾವು ದೇವಾಲಯಗಳನ್ನು ಕಟ್ಟುವುದನ್ನೇ ದೊಡ್ಡದು ಎಂದುಕೊಳ್ಳುತ್ತಾ ನಮ್ಮದೇ ದೇಹವೆಂಬ ದೇವಾಲಯವನ್ನು ನಿರ್ಲಕ್ಷಿಸಿದ್ದೇವೆ. ನಮ್ಮ ದೇಹವೆಂಬ ದೇವಾಲಯವನ್ನು ಹೊಕ್ಕು ನೋಡಿ, ಅದರೊಳಗಿನ ದೈವವನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾಗಿದೆ. ಭಾರತ ಸಂವಿಧಾನದ ಪೀಠಿಕೆಯಲ್ಲಿ ಜಾತ್ಯತೀತತೆ ಕುರಿತು ತಿಳಿಸಲಾಗಿದೆ. ಆದರೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಜಾತೀಯತೆಯ ರಾಜಕಾರಣವನ್ನು ನಿರ್ಲಜ್ಜೆಯಿಂದ ನಾವು ಮಾಡುತ್ತಿರುವುದು ದುರಂತ. ವಚನಕಾರರಲ್ಲಿ ಜಾತಿನಿರಸನ ನಡೆ-ನುಡಿಯು ಇಡೀ ಜಗತ್ತಿಗೆ ಮಾರ್ಗದರ್ಶಿಯಾಗಿದೆ. ವಚನಕಾರರಂತೆ ನಾವೂ ಪರಿವರ್ತನಾಗತರಾಗಿ ಬಾಳಬೇಕಾಗಿದೆ ಎಂದು ಆಶಿಸಿದರು.

ವಿಚಾರಗೋಷ್ಠಿ-೧ರ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸರೂ ವಚನ ಚಿಂತಕರೂ ಆದ ಡಾ.ಪಿ.ವಿ.ನಾರಾಯಣ ಅವರು ಮಾತನಾಡುತ್ತಾ, ‘ಕನ್ನಡ ಸಾಹಿತ್ಯ ಆರಂಭವಾದದ್ದೇ ಅವೈದಿಕ ಚಿಂತನೆಯಿAದ. ಇದಕ್ಕೆ ಮತ್ತಷ್ಟು ಪುಷ್ಠಿಯನ್ನು ನೀಡಿದ್ದು ವಚನ ಚಳವಳಿ. ಕನ್ನಡ ಜನತೆಯ ಆಲೋಚನೆಯ ಸಾರವೇ ವಚನಸಾಹಿತ್ಯ. ಜನಸಮೂಹದ ಬಿನ್ನಹಕ್ಕೆ ಬಾಯಿಯಿಲ್ಲದಾಗ ಬಾಯಿ ಕೊಟ್ಟಿದ್ದು ವಚನ ಚಳವಳಿ. ಸಾಮೂಹಿಕ ತಲ್ಲಣಗಳು ಕುದಿದು ಕುದಿದು ವಚನ ಚಳವಳಿಯ ಹುಟ್ಟಿಗೆ ಕಾರಣವಾಯಿತು. ವಚನ ಸಾಹಿತ್ಯವು ಕಾಲಕಾಲಕ್ಕೂ ಚೈತನ್ಯಶೀಲವಾದುದು. ವಚನಗಳಂತೆ ಯಾವುದು ಸಮಾನತೆಯನ್ನು ಉಸಿರಾಡುತ್ತದೆಯೋ ಅದು ಸಾರ್ವಕಾಲಿಕ ಹಾಗೂ ವಿಶ್ವಾತ್ಮಕವಾಗಿರುತ್ತದೆ. ಅಸಮಾನತೆ ಹಾಗೂ ಅನಾಚಾರದ ತಾಣಗಳಾದ ದೇವಸ್ಥಾನಗಳನ್ನು ಶರಣರು ತಿರಸ್ಕರಿಸಿದಂತೆ ನಾವೂ ತಿರಸ್ಕರಿಸಬೇಕಾಗಿದೆ. ನಾವೆಲ್ಲರೂ ಬುದ್ಧರಂತೆ ಆಲೋಚನೆ ಮಾಡಬೇಕಾಗಿದೆ. ಯಾರೋ ಹೇಳಿದರೆಂದೂ ನೇರವಾಗಿ ಒಪ್ಪಿಕೊಳ್ಳದೆ, ಅದನ್ನು ವಿಚಾರಿಸಿ, ಪರಿಶೀಲಿಸಿ, ಪ್ರಶ್ನಿಸಿ ಒಪ್ಪಿಕೊಳ್ಳುವಂತೆ ಸೂಚಿಸಿದ ಬುದ್ಧರ ಮಾರ್ಗದಲ್ಲಿ ನಾವೆಲ್ಲರೂ ಬುದ್ಧರಾಗಬೇಕಾಗಿದೆ ಎಂದು ತಿಳಿಸಿದರು.

ವಿದ್ವಾಂಸರಾದ ಪ್ರೊ.ಮೊರಬದ ಮಲ್ಲಿಕಾರ್ಜುನ ಅವರು ‘ವಚನ ಸಾಹಿತ್ಯ ವಿಶ್ವಾತ್ಮಕ ಸ್ವರೂಪ’ ಕುರಿತು ಉಪನ್ಯಾಸ ನೀಡಿದರು. ೧೨ನೇ ಶತಮಾನದಲ್ಲಿ ಶರಣರು ಹೇಳಿದ ವಿವೇಕವನ್ನು ೨೧ನೇ ಶತಮಾನದಲ್ಲಿ ಮರುಸ್ಥಾಪಿಸಲು ಸಾಧ್ಯವೇ ಎಂಬುದನ್ನು ಕುರಿತು ನಾವೆಲ್ಲರೂ ಚಿಂತನ-ಮAಥನ ನಡೆಸಬೇಕಾಗಿದೆ. ಯಾಕೆಂದರೆ ಶರಣರು ಯಾವುದನ್ನು ಹೇಳಿದ್ದರೋ ಅದನ್ನು ಸಮಾಧಿ ಮಾಡಿ ಮಾಡಬಾರದ್ದನ್ನು ಮಾಡುತ್ತಿದ್ದೇವೆ. ನಾವಿಂದು ದೇವಾಲಯಗಳನ್ನು ಹಾಗೂ ಮಠಗಳನ್ನು ವಿಜೃಂಭಿಸುತ್ತಿದ್ದೇವೆ, ಆದರೆ ಶರಣರು ಆಲಯದ ಪರವಾಗಿರಲಿಲ್ಲ; ಬಯಲಿಗಾಗಿ ಹಂಬಲಿಸಿದರು, ಬಯಲು ತತ್ವವನ್ನು ಬಿತ್ತಿದರು. ಬಯಲು ವಿಶ್ವಾತ್ಮಕವಾದುದು. ವಚನಕಾರರು ಮನುಷ್ಯನನ್ನು ಮನುಷ್ಯನನ್ನಾಗಿಯೇ ನೋಡಿದರು. ಸಮೃದ್ಧ ಸಮಾಜದ ನಿರ್ಮಾಣದ ಆಶಯದಲ್ಲಿ ಸರ್ವ ವೃತ್ತಿಬಾಂಧವರು ಒಂದಾಗಿ ಅನುಭಾವಗೋಷ್ಠಿ ನಡೆಸಿದ್ದು ಜಗತ್ತಿನಲ್ಲಿಯೇ ಅಪರೂಪವಾದದ್ದು ಎಂದು ಅಭಿಪ್ರಾಯಪಟ್ಟರು.

ವಿಚಾರಸಂಕಿರಣದಲ್ಲಿ ಮಂಡನೆಗೆ ಆಯ್ಕೆಯಾಗಿದ್ದ ೮೫ ಸಂಶೋಧನ ಲೇಖನಗಳನ್ನು ‘ವಚನ ಚಿಂತನ ವಿಶ್ವ ದರ್ಶನ-ಸಂಪುಟ ೧’ ಹಾಗೂ ‘ವಚನ ಚಿಂತನ ವಿಶ್ವ ದರ್ಶನ-ಸಂಪುಟ ೨’ ಎಂಬ ಎರಡು ಸಂಪುಟಗಳಲ್ಲಿ ಸಂಪಾದಿಸಲಾಗಿದ್ದು, ಉದ್ಘಾಟನಾ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಪರ್ಯಾಯ ವಿಚಾರಗೋಷ್ಠಿಯಲ್ಲಿ ಸುಮಾರು ೫೦ಕ್ಕೂ ಹೆಚ್ಚು ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ವಿದ್ವತ್ಪೂರ್ಣ ಪ್ರಬಂಧಗಳನ್ನು ಮಂಡಿಸಿದರು. ಕ್ರಿಸ್ತು ಜಯಂತಿ ಕಾಲೇಜಿನ ಮಾನವ ಸಂಪನ್ಮೂಲ ಕೇಂದ್ರದ ನಿರ್ದೇಶಕರಾದ ರೆ.ಫಾ.ಜೋಶಿ ಮಾಥ್ಯು ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ ಎ.ವಿ ಅವರು, ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್. ಅವರು ನಿರೂಪಿಸಿದರು. ವಿಚಾರ ಸಂಕಿರಣದ ಸಂಚಾಲಕರಾದ ಡಾ.ರವಿಶಂಕರ್ ಎ.ಕೆ., ಡಾ.ಸೈಯದ್ ಮುಯಿನ್ ಹಾಗೂ ಸಹಸಂಚಾಲಕರಾದ ಡಾ.ಎಂ.ಭೈರಪ್ಪ ಹಾಗೂ ಡಾ.ಪ್ರೇಮ್ಕುಮಾರ್ ಅವರು ಉಪಸ್ಥಿತರಿದ್ದರು.


Download the ( Kristu Jayanti + ) App for easy access and to keep yourselves updated with the latest news & activities on the campus. Download from Google Play store (android devices) and app store (Apple devices).|